KAGGA Summary
This contains summary of few Kagga from different authors
ಶ್ರೀ ರವಿತಿರುಮಲೈ ಅವರ ಕಗ್ಗರಸಧಾರೆಯಿಂದ
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ ।
ಧರಣಿಯವು, ಗಗನದವು, ಮನುಜಯತ್ನದವು ॥
ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ ।
ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ॥ ೭೨೧ ॥
ಪಿರಿದೆಂಬೆನವುಗಳೊಳು= ಪಿರಿದು+ಎಂಬ+ಅನುವುಗಳ+ಒಳು, ಧರುಮವರಿತವನೊಲುಮೆ=ಧರುಮವ+ಅರಿತ+ಅವನ+ಒಲುಮೆ, ಅರಿವುಳ್ಳೊಲುಮ=ಅರಿವು+ಉಳ್ಳ+ಒಲುಮೆ,ಅನುವುಗಳ=ಅನುಕೂಲತೆಗಳ, ಮೈಮೆಗಳು = ಮಹಿಮೆಗಳು, ಪಿರಿದು=ಹಿರಿಯದು
ಈ ಜಗತ್ತಿನ ಸೃಷ್ಟಿಯಲಿ ನೂರಾರು ಮಹಿಮೆಗಳಿವೆ. ಇವುಗಳಲ್ಲಿ ಭೂಮಿಯದು ಹಲವು ಗಗನದ್ದು ಹಲವು, ಮನುಷ್ಯ ಪ್ರಯತ್ನದ ಸಾಧನೆಗಳಲ್ಲಿ, ಮಹತ್ತಾದ ಸಾಧನೆ ‘ಧರ್ಮವನ್ನು’ ಅರಿತವನ ಒಲುಮೆ ಅಥವಾ ಪ್ರೀತಿ. ಅಂತಹ ಧರ್ಮಯುಕ್ತವಾದ ಪ್ರೀತಿಯಲ್ಲಿ ‘ಅರಿವು’ ಎಂದರೆ ಜ್ಞಾನವೂ ಸೇರಿಕೊಂಡರೆ ಅದು ಅತೀ ಉತ್ತಮವಾದ ಸಾಧನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
ಅವುಗಳಲ್ಲಿ ಗಗನದಲ್ಲಿನ ತೇಜಫುಂಜಗಳು, ನಕ್ಷತ್ರಗಳು, ಗ್ರಹಗಳು, ಸೂರ್ಯ ಚಂದ್ರರು, ಮಳೆ, ಗಾಳಿ, ಬೆಳಕು ಇತ್ಯಾದಿ, ಭೂಮಿಯ ಮೇಲಿನ ಕಡಲು, ಗಿರಿ ಪರ್ವತಗಳು, ನದಿ, ಕಾಡುಗಳು, ಜಲಪಾತಗಳು,ಕೋಟಿ ಕೋಟಿ ವಿಧದ ಗಿಡ,ಮರ, ಸಸ್ಯರಾಶಿಗಳು, ಕಗ, ಮೃಗ, ಜಲಚರ ಇತ್ಯಾದಿಗಳು. ಸೃಷ್ಟಿಯಲ್ಲಿರುವ ಪ್ರಾಣಿಗಳಲ್ಲಿ ಮನುಷ್ಯ ಶ್ರೇಷ್ಠ ಪ್ರಾಣಿ. ಮಿಕ್ಕೆಲ್ಲ ಪ್ರಾಣಿಗಳಿಗಿಂತ ಅವನ ಅವಿಷ್ಕಾರಗಳು ಬಹಳ, ವಿಪುಲ ಮತ್ತು ಶ್ರೇಷ್ಠ. ಸಹಸ್ರಾರು ವರ್ಷಗಳ ಮಾನವ ‘ಜ್ಞಾನ’ ವಿಕಾಸದ ಚರಿತ್ರೆಯನ್ನು ನೋಡಿದರೆ ಅವನ ಆವಿಷ್ಕಾರಗಳ ಮಹಾಪೂರವೇ ನಮಗೆ ಕಾಣುತ್ತದೆಆವನ ಆವಿಷ್ಕಾರಗಳಲ್ಲಿ ಬಹಳ ಶ್ರೇಷ್ಟವಾದದ್ದು ಅವನ "ಧರ್ಮದಿಂದ ಕೂಡಿದ" ಜಗತ್ತಿನ ಮೇಲಿನ ಪ್ರೇಮ. ಮನುಷ್ಯರಿಗೆ ತ್ರಿಗುಣಾತ್ಮಕವಾದ ಮತ್ತು ಇಂದ್ರಿಯ ಪ್ರೇರಿತ ಗುಣಗಳಿರುವಾಗ, ಸ್ವಾಭಾವಿಕವಾಗಿಯೇ ಜಗತ್ತಿನ ವಸ್ತು, ವಿಷಯ ಮತ್ತು ವ್ಯಕ್ತಿಗಳ ಮೇಲಿನ ಒಲವಿರುತ್ತದೆ. ಆದರೆ ಆ ಒಲವಿಗೆ ‘ಧರ್ಮ’ ದ ಬಲವಿದ್ದರೆ ಮಾತ್ರ ಅದು ಲೋಕಕ್ಕೆ ಪೂರಕವಾಗಿರುತ್ತದೆ. ಆದರೆ ಆ ಧರ್ಮವು ಯಾವುದು ಎಂದು ಹೇಗೆ ಅರಿಯುವುದು? ಪ್ರತಿ ವಸ್ತುವಿಗೂ ವಿಷಯಕ್ಕೂ ಪ್ರತೀ ಸಂದರ್ಭಕ್ಕನುಗುಣವಾಗಿ ಬೇರೆ ಬೇರೆ ಧರ್ಮವಿರುತ್ತದೆ. ಹಾಗಾಗಿ ಧರ್ಮದ ಅನ್ವಯವನ್ನು ಅರಿಯುವುದು ಹೇಗೆ? ಎಂಬುದೇ ಪ್ರಶ್ನೆ ಅದನ್ನು ಕಾಲಕ್ರಮೇಣ, ಅನುಭವದಿಂದ, ಸಂಸ್ಕಾರಗಳಿಂದ ಮತ್ತು ಹಿರಿಯರು ತೋರಿದ
ಮಾರ್ಗದರ್ಶನದಿಂದ ಅರಿಯಬೇಕು. ಅಂತಹ ಅರಿವು ಧರ್ಮಕ್ಕೆ ಪೂರಕವಾದಾಗ, ಜಗತ್ತಿನಲ್ಲಿ ನಾವು ಒಲವತೋರಿ ಮಾಡುವ ನಮ್ಮ ಎಲ್ಲಾ ಕಾರ್ಯ ಕೆಲಸಗಳು ಧರ್ಮಬದ್ಧವಾಗಿಯೂ, ಅರಿವಿನಿಂದ ಕೊಡಿದ್ದಾಗಿದ್ದು ಲೋಕಹಿತವಾಗಿರುತ್ತದೆ.ಆದರೆ ಇಂದಿನ ಪರಿಸ್ಥತಿ ಹಾಗಿದೆಯೇ? ಎಂದು ನೋಡಿದರೆ, ನಮಗೆ ಕಾಣುವುದು ಕೇವಲ ಸ್ವಾರ್ಥಪೂರಿತವಾದ, ಅಸೂಯಾಪೂರಿತವಾದ ಮತ್ತು ಅಜ್ಞಾನಪ್ರೇರಿತವಾದ ಒಲುಮೆಯೇ ಹೊರತು ಅರಿವಿನಿಂದ ಕೂಡಿದ ಮತ್ತು ಧರ್ಮದಿಂದ ಕೂಡಿದ ಒಲುಮೆಯಲ್ಲವೇ ಅಲ್ಲ. ಇಂದ್ರಿಯಗಳಾಸೆಯನ್ನು ಪೂರೈಸಲು ಮತ್ತು ನಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲು ನಾವು ಪಡುವ ಆತುರದಲ್ಲಿ ಧರ್ಮವನ್ನೂ ಮತ್ತು ಅದರುಪಯೋಗದ ಅರಿವನ್ನೂ ಮರೆತಿದ್ದೇವೆ. ಮನುಷ್ಯನ ಹೊಸ ಹೊಸ ಅವಿಷ್ಕಾರಗಳು ಅವನನ್ನು ಅಂತರಂಗದ ಔನ್ನತ್ಯಕ್ಕೆ ಕೊಂಡುಹೋಗುವ ಬದಲು ಅಧೋಗತಿಗೆ ತಳ್ಳುತ್ತಿದೆ. ಇದೇ ಇಂದಿನ ಮಾನವ ಬದುಕಿನ ದುರಂತ. ನಾವು, ಇಂತಹ ಸ್ತಿತಿಯ ಹಿಡಿತದಿಂದ ಹೊರಬರಲು ಮಾಡುವ ಪ್ರತಿಯೊಂದು ಪ್ರಯತ್ನವೂ ನಮ್ಮ ಉದ್ಧಾರಕ್ಕೊದಗುವ ಏಣಿಯ ಮೆಟ್ಟಲುಗಳಾಗುತ್ತವೆ.
There are many a wonders in this creation - wonders of earth, the sky and that of human creation. Of all of them, I consider the love shown by person who knows (and follows) Dharma to be the greatest wonder. When one loves after realization (as opposed to love due to attachment) - it is great. - Mankutimma
ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ? ।
ಓಲೆಗಳನವರವರಿಗೈದಿಸಿರೆ ಸಾಕು ॥
ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! ।
ಕಾಲೋಟವವನೂಟ - ಮಂಕುತಿಮ್ಮ ॥ ೭೨೭ ॥
ಓಲೆಗಾರನಿಗೇಕೆ=ಓಲೆಗಾರನಿಗೆ+ಏಕೆ, ಓಲೆಗಳನವರವರಿಗೈದಿಸಿದರೆ=ಒಲೆಗಳನು+ಅವರವರಿಗೆ+ಐದಿಸಿದರೆ+ಸಾಕು, ಕಾಲೋಟವವನೂಟ=ಕಾಲ+ಓಟವು+ಅವನ+ಊಟ,ಓಲೆಗಾರ=ಪತ್ರಗಳನ್ನು ವಿತರಿಸುವವ, ಐದಿಸಿದರೆ=ತಲುಪಿಸಿದರೆ, ಶೂಲ=ಇರಿತ,
ಪತ್ರ ಹಂಚುವವನಿಗೆ ಪತ್ರದೊಳಗಿನ ಸುದ್ಧಿಯ ಚಿಂತೆ ಏಕೆ? ಬೇರೆ ಬೇರೆಯವರಿಗೆ ಸೇರಬೇಕಾದ ಪತ್ರಗಳು ಅವರವರಿಗೆ ಸೇರಿಸಿದರೆ ಸಾಕು. ಆ ಪತ್ರಗಳಲ್ಲಿ, ಸಾಲದ ವಿಷಯವೋ, ನೋವಿನ ವಿಚಾರವೋ ಅಥವಾ ಸಂತೋಷದ ಸಮಾಚಾರವೋ ಏನಾದರಾಗಲಿ ಅದು ಕೇವಲ ಯಾರಿಗೆ ಸೇರಬೇಕೋ ಅವರಿಗೆ ಸೇರಿದರೆ ಸಾಕು. ಅದನ್ನು ತಲುಪಿಸುವವನಿಗೆ, ಆ ಪತ್ರಗಳನ್ನು ತಲುಪಿಸಿ ಕಾಲದೂಡುವುದೇ ಧರ್ಮ ಎಂದು, ಬದುಕಿನಲ್ಲಿ ಒಂದು ನಿರ್ಲಿಪ್ತ ಭಾವವನ್ನು ಬೆಳೆಸಿಕೊಳ್ಳುವ ಬಗೆಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
ಹಂಚುವುದಷ್ಟೇ ಕರ್ಮ. ಹಂಚುವ ಭಾವಗಳೊಂದಿಗೆ ನಮಗೆ ನಂಟು ಇರಬಾರದು. ಅಂಚೆಯನ್ನು ಹಂಚುವ ‘ ಅಂಚೆಯಣ್ಣ’ ಎಂದಾದರೂ ತಾ ಹಂಚುವ ಒಲೆಗಳಲ್ಲಿ ಏನಿದೆ ಎಂದು ನೋಡುವನೆ? ಅಥವಾ ಆಅ ಒಲೆಗಳಲ್ಲಿನ ವಿಚಾರಗಳು ಅವನ ಮೇಲೆ ಯಾವುದಾದರೂ ಪ್ರಭಾವ ಬೀರುವುದೇ? ಹಾಗೆಯೇ ನಮ್ಮ ಪೂರ್ವ ಕರ್ಮದನುಸಾರ ನಾವು ವಿತರಿಸುವ ಭಾವಗಳನ್ನು ವಿತರಿಸುವುದಷ್ಟೇ ನಮ್ಮ ಕೆಲಸ ಮತ್ತು ಧರ್ಮ. ಅದರಿಂದ ಅದನ್ನು ಪಡೆದವರಿಗೆ, ನೋವೋ, ನಲಿವೋ, ಎದೆ ಶೂಲವೋ, ನಗುವೋ, ಸಂತೋಷವೋ, ಕೋಪವೋ, ಜಿಗುಪ್ಸೆಯೋ, ದ್ವೇಷವೋ ಆಗಬಹುದು. ಹಂಚುವುದಷ್ಟೇ ನಮ್ಮ ಕೆಲಸವಾದ್ದರಿಂದ, ನಾವು ಹಂಚಿದ್ದರಿಂದಾಗುವ ಪರಿಣಾಮಗಳಿಗೆ ನಮ್ಮ ದಾಯತ್ವವಿರುವುದಿಲ್ಲವಾದ್ದಾರಿಂದ ನಾವು ಚಿಂತೆ ಮಾಡುವ ಅವಶ್ಯಕತೆಯಿಲ್ಲ.ಆದರೆ ಹಾಗೆ ವಿತರಿಸುವಾಗ ನಾವು ವಿತರಿಸುವ ಭಾವ ಯಾವ ರೀತಿಯದ್ದು, ಆ ರೀತಿಯ ಭಾವಕ್ಕೆ ನಮ್ಮ ಪೂರ್ವ ಕರ್ಮವೇನಿರಬಹುದು ಮತ್ತು ನಮ್ಮ ಭಾವ ಶುದ್ಧಿಗೆ ಎಂತಹ ಕರ್ಮದ ಅವಶ್ಯಕತೆ ಇದೆ ಮತ್ತು ಅಂತಹ ಶುದ್ಧ ಕರ್ಮಗಳನ್ನು ಮಾಡುವ ವಿಧಾನವೆಂತು, ಎಂದು ಹಲವಾರು ರೀತಿಯಲ್ಲಿ ನಮ್ಮನ್ನು ನಾವೇ ಪ್ರಶ್ನಿಸಿಕೊಂಡು, ಆತ್ಮಾವಲೋಕನಮಾಡಿಕೊಳ್ಳುತ್ತಾ ಜೀವಿಸಿದರೆ ಮಾನ್ಯ ಗುಂಡಪ್ಪನವರು " ಕಾಲೋಟವವನೂಟ " ಎಂದು ಹೇಳಿದ ಹಾಗೆ ನಮ್ಮ ಬದುಕಿನ ನಡೆ ಶುದ್ಧವಾಗಬಹುದು. ಕಾನದೊಟ್ಟಿಗೆ ಓಡುವ ನಮ್ಮ ಜೀವನ, ಕಾಲ ಕ್ರಮಿಸಿದಂತೆ, ಸುಧಾರಿಸಬೇಕು, ಶುದ್ಧವಾಗಬೇಕು ಮತ್ತು ಸಂಸ್ಕರಣಗೊಳ್ಳಬೇಕು. ಹಾಗೆ ಸಂಸ್ಕರಣಗೊಂಡ ನಡೆಯಿಂದ, ಶುದ್ಧ ಕರ್ಮಿಗಳಾಗಿ, ಸದ್ಭಾವವನ್ನು ಬೆಳೆಸಿಕೊಂಡು ನಾವು ಅಂತ ಭಾವಗಳನ್ನೇ ವಿತರಿಸುವವರಂತಾದರೆ, ನಮ್ಮ ಜೀವನವೂ ಸಾರ್ಥಕವಾಗುತ್ತದೆ.ಅದಕ್ಕೆ ಬದುಕನ್ನು ಅನುಭವಿಸಬೇಕು, ಆ ಅನುಭವಗಳನ್ನು ನಾವು ಸಾಕ್ಷಿಯಂತೆ ನೋಡುತ್ತಾ, ಅದರೊಳಗಿನ ನ್ಯೂನತೆಗಳನ್ನು ‘ತೊಳೆ’ಯುತ್ತಾ ನಮ್ಮ ನಡೆ, ನುಡಿ, ವಿಚಾರ ಮತ್ತು ಆಚಾರಗಳನ್ನು ಸುಧಾರಿಸಿಕೊಳ್ಳುತ್ತಾ ಜೀವನವನ್ನು ಕಳೆದರೆ ನಮ್ಮ ಕರ್ಮಗಳು ಶುದ್ಧವಾಗಿ ಮುಂದೆ ನಾವು ವಿತರಿಸುವ ‘ಓಲೆಗಳು’ ಕೇವಲ ಸಂತೋಷದಿಂದಲೋ, ನಗೆಯಿಂದಲೋ ಕೂಡಿ ಜಗತ್ತಿನ ಒಲುಮೆಗೆ ಮತ್ತು ನಲುಮೆಗೆ ನಾವೂ ಕಾರಣರಾದರೆ, ನಮ್ಮದು ಖಂಡಿತ ಸಾರ್ಥಕ ಬದುಕಾಗುತ್ತದೆ.
Why is the messenger bothered about the content of the message? His job is done if he delivers them to the right people. The message could be about debt, death, pain or happiness. He is not bothered. He is running around to earn his food. - Mankutimma
ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? ।
ಇಕ್ಕುವರದಾರದನು ಕರೆದು ತಿರುಪೆಯನು? ॥
ರೆಕ್ಕೆ ಪೋದಂತಲೆದು, ಸಿಕ್ಕಿದನುಣ್ಣುವುದು ।
ತಕ್ಕುದಾ ವ್ರತ ನಿನಗೆ - ಮಂಕುತಿಮ್ಮ ॥ ೭೩೦ ॥
ಮುನ್ನರಿಯುವುದೆ= ಮುನ್ನ+ಅರಿಯುವುದೆ, ಇಕ್ಕುವರದಾರದನು=ಇಕ್ಕುವರು+ಅದು+ಆರು+ಅದನು, ಪೋದಂತಲೆದು=ಪೋದಂತೆ+ಅಲೆದು, ಸಿಕ್ಕಿದದನುಣ್ಣುವುದು=ಸಿಕ್ಕಿದ+ಅದನು+ಉಣ್ಣುವುದು, ತಕ್ಕುದಾ=ತಕ್ಕುದು+ಆತೆರನ=ರೀತಿ ಅಥವಾ ಗತಿ, ಇಕ್ಕುವರು=ಕೊಡುವರು, ನೀಡುವರು, ತಿರುಪೆ= ಭಿಕ್ಷೆ ಅಥವಾ ಉಣಿಸು.
ತನ್ನ ರೆಕ್ಕೆಯ ಬಡಿಯುತ್ತಾ ಸಾಗುವ ಹಕ್ಕಿಗೆ ತನ್ನ ಪಯಣ ಹೇಗೆ ಸಾಗುತ್ತದೆ ಎಂದು ಮುಂಚೆಯೇ ಗೊತ್ತಿರುವುದೇ? ಅದಕ್ಕೆ ಯಾರಾದರೂ ‘ಬಾ ಬಾ’ ಎಂದು ಕರೆದು ಊಟವನ್ನು ನೀಡುತ್ತಾರೆಯೇ? ರೆಕ್ಕೆ ಬಡಿದ ಹಾಗೆ ಅದರ ಗತಿ ಸಾಗುವುದು ಮತ್ತು ಎಲ್ಲಿ ಏನು ಸಿಕ್ಕರೆ ಅದನ್ನು ತಿನ್ನುವುದು. ಈ ರೀತಿ ಬದುಕ ಸಾಗಿಸಬೇಕೆಂಬುದೇ ‘ನಿನ್ನ ವ್ರತವಾಗಿರಬೇಕು’ ಎಂದು ಸ್ವಚ್ಚಂದ ಜೀವನದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
ಇಲ್ಲಿ ಹಕ್ಕಿಯ ದೃಷ್ಟಾಂತವನ್ನು ಕೊಟ್ಟು ನಮಗೆ ಸಂತೋಷವಾಗಿ ಬದುಕುವ ಪರಿಯನ್ನು ಅರುಹಿದ್ದಾರೆ. ಮಾರ್ಗ ಕಂಡಂತೆ ಮುನ್ನಡೆಯುತ್ತಾ ಹೋಗುವುದೇ ವ್ರತವಾಗಿರಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಆದರೆ ಬದುಕಿನಲ್ಲಿ ಒಂದು ನಿರ್ಧಿಷ್ಟ ಗುರಿ ಇರಬೇಡವೇ? ಎಂದರೆ, ಇರಬೇಕು ಆದರೆ ಗುರಿಯ ಸಾಧನೆಗೋ ಅಥವಾ ಸಾಧಿಸಿದ ನಂತರ ಸಿಗಬಹುದಾದಂತಹ ಫಲಕ್ಕೋ ನಾವು ಭಾವನಾತ್ಮಕವಾಗಿ ಅಂಟಿಕೊಳ್ಳಬಾರದು. ಏಕೆಂದರೆ ಬಹಳಷ್ಟು ಬಾರಿ ನಾವಂದುಕೊಂಡ ಕೆಲಸ ನಾವಂದುಕೊಂಡ ಸಮಯದಲ್ಲಿ ನಾವಂದುಕೊಂಡ ರೀತಿಯಲ್ಲಿ ಮಾಡಲಾಗುವುದೇ ಇಲ್ಲ. ಹಾಗೆಯೇ ನಮ್ಮ ಇಚ್ಛೆ ಮತ್ತು ವಸ್ತು ಸ್ಥಿತಿಯೊಳಗಿನ ಅಂತರಕ್ಕೆ ಕಾರಣವೇನೆಂದು ನಮಗೆ ಅರ್ಥವಾಗುವುದೇ ಇಲ್ಲ. ಹಾಗಾಗಿ ನಮ್ಮ ಕೆಲಸ ಮತ್ತು ಅದರಿಂದ ಸಿಗುವ ಫಲಕ್ಕೆ ನಾವು ಭಾವನಾತ್ಮಕವಾಗಿ ಅಂಟಿಕೊಂಡರೆ, ನಮಗೆ ನಿರಾಸೆಯಾಗುವ, ದುಃಖವಾಗುವ ಸಾಧ್ಯತೆಗಳು ಹೆಚ್ಚು.ಆಸೆ ಪಡಬೇಕು. ಆದರೆ ಆ ಆಸೆಗೆ ಅಂಟಿಕೊಳ್ಳಬಾರದು. ಹಾಗೆ ಅಂಟಿಕೊಂಡಾಗ, ನಮ್ಮ ಯೋಜನೆಗಳಿಗೂ ಸಿಗುವ ಫಲಕ್ಕೂ ನಡುವೆ ಬಹಳ ಅಂತರವಿರುವುದರಿಂದ ನಿರಾಸೆಯಾಗುವ ಸಾಧ್ಯತೆಗಳು ಹೆಚ್ಚು. ಆಸೆಯಿಂದ ಮುನ್ನಡೆದಾಗ ಅನ್ಯರಿಗೆ ನಮಗಿಂತ ಅಧಿಕವಾಗಿ ಲಭ್ಯವಾದರೆ, ಅವರನ್ನು ಕಂಡು ಈರ್ಷ್ಯೆ, ನಮಗೆ ಅಧಿಕವಾಗಿ ಲಭ್ಯವಾದರೆ ಅಹಂಕಾರದಿಂದ ಮದ, ನಮಗೆ ಸಿಗದಿದ್ದರೆ ಕ್ರೋಧ, ಇಷ್ಟು ಸಿಕ್ಕರೆ ಮತ್ತಷ್ಟರ ಆಸೆ, ಹೀಗೆ ನಾನಾ ವಿಧವಾದ ದುರ್ಭಾವಗಳು ನಮ್ಮೊಳಗೆ ನುಗ್ಗಿ ನಮ್ಮ ಪತನಕ್ಕೆ ನಾಂದಿ ಹಾಡುತ್ತದೆ. ಹಾಗಾಗಿ ಗುರಿಯಿರಬೇಕು, ಆಸೆಯಿರಬೇಕು, ಫಲದ ಅಪೇಕ್ಷೆಯಿಂದಲೇ ಮುನ್ನಡೆಯಬೇಕು, ಆದರೆ ಆ ಗುರಿ, ಆಸೆ ಅಥವಾ ಫಲಕ್ಕೆ ಭಾವನಾತ್ಮಕವಾಗಿ ಅಂಟಿಕೊಳ್ಳದೇ ಸಾಗಬೇಕು. ಹಾದಿಯಲ್ಲಿ ಸಿಕ್ಕ ಫಲವನ್ನು ‘ ಪರಮಾತ್ಮನ ಪ್ರಸಾದ ‘ ವೆಂದು ಪರಿಗಣಿಸಿ ಸಾಗಬೇಕು. ಇದನ್ನೇ ಬಹುಶಃ ಮಾನ್ಯ ಗುಂಡಪ್ಪನವರು " ರೆಕ್ಕೆ ಪೋದಂತಲೆದು, ಸಿಕ್ಕಿದದನುಣ್ಣುವುದು" ಎಂದಿದ್ದಾರೆ ಎಂದು ಅನಿಸುತ್ತದ್ದೆ.ಹಕ್ಕಿ ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಊರಿಂದ ಊರಿಗೆ ಅಲೆಯುತ್ತಾ ತನ್ನ ಜೀವನವನ್ನು ತಳ್ಳುತ್ತದೆ. ನಾವು ವಸ್ತುವಿನಿಂದ ವಸ್ತುವಿಗೆ, ವಿಷಯದಿಂದ ವಿಷಯಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ನಮ್ಮ ಆಸ್ಥೆ, ಗಮನ ಮತ್ತು ನಿಷ್ಟೆಗಳನ್ನು ಹೇಗೆ ಬದಲಾಯಿಸುತ್ತಾ ಬದುಕುತ್ತೇವೆ. ಹಕ್ಕಿ ಯಾವುದೇ ಕೊಂಬೆಗೆ ಅಥವಾ ಊರಿಗೆ ಅಂಟಿಕೊಳ್ಳದೆ ಇರುತ್ತದೆ. ಅಂತೆಯೇ ನಮ್ಮ ಬದುಕನ್ನೂ ನಾವು ರೂಪಿಸಿಕೊಂಡರೆ, ಹಕ್ಕಿಯಂತೆ ಸ್ವಚ್ಚಂದ ಬದುಕನ್ನು, ಆಶಾರಹಿತವಾಗಿ, ಬಂಧರಹಿತವಾಗಿ ಆನಂದದಿಂದ ಕಳೆಯಬಹುದು. ನಾವೂ ಜನ್ಮದಿಂದ ಜನ್ಮಕ್ಕೆ ಹಾರುವ ಹಕ್ಕಿಗಳೇ ಅಲ್ಲವೇ?
Will the bird know in advance what is going to happen it during the day? Is there anyone who will call it and give scraps. It will go as its wings take it. It will eat whatever it gets. Its lifestyle is very suitable to you also. - Mankutimma
Comments
Post a Comment